"ಫೈಟರ್" ರೈತನ ಮಗನೊಬ್ಬ ರೈತರಿಗೋಸ್ಕರ ಹೋರಾಡುವ ಕಥಾಹಂದರ ಹೊಂದಿರುವ ಚಿತ್ರ. ಕನ್ನಡದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಫೈಟರ್ ಚಿತ್ರ ಇದೇ ಅ.6ರ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೈಲರ್ ನ್ನು ಆರಂಭದಲ್ಲಿ ಫೈಟರ್ ಆಗೇ ಚಿತ್ರರಂಗಕ್ಕೆ ಬಂದಿದ್ದ ನಟ ದುನಿಯಾ ವಿಜಯ್ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಮಂತ್ರಿ ಮಾಲ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ವಿಜಯ್, ನಾನು ಪ್ರಭಾಕರ್ ಅವರ ಅಭಿಮಾನಿ. ಅವರು ಚಿತ್ರಗಳಲ್ಲಿ ಫೈಟ್ ಮಾಡುವುದನ್ನು ನೋಡುತ್ತಲೇ ಫೈಟಿಂಗ್ ಕಲಿತೆ. ಈಗ ಅವರ ಪುತ್ರ ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರದ ಟ್ರೈಲರ್ ರಿಲೀಸ್ ಮಾಡ್ತಿರುವುದಕ್ಕೆ ಖುಷಿಯಾಗ್ತಿದೆ. ಟ್ರೈಲರ್ ಅದ್ಭುತವಾಗಿ ಬಂದಿದೆ.ಮಿಡ್ಲ್ ಸ್ಕೂಲ್ನಲ್ಲಿದ್ದಾಗ ಟೈಗರ್ ಪ್ರಭಾಕರ್ ಅವರನ್ನು ‘ರಣಭೇರಿ’ ಚಿತ್ರದ ಚಿತ್ರೀಕರಣದಲ್ಲಿ ನೋಡಿದ್ದೆ. ಅಭಿಮಾನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುವಾಗ ಎರಡ್ಮೂರು ಗಂಟೆಗಳ ಕಾಲ ನಾನು ಚಿತ್ರೀಕರಣ ನೋಡಿದ್ದೆ. ಪ್ರಭಾಕರ್, ಶಂಕರ್ ನಾಗ್ ಮತ್ತು ಅಂಬರೀಷ್ ಮೂವರನ್ನು ಒಟ್ಟಿಗೆ ಒಂದೇ ಸಲ ಅಲ್ಲಿ ನೋಡಿದ್ದೆ. ಪ್ರಭಾಕರ್ ಅವರು ಫೈಟ್ ಮಾಡುತ್ತಿದ್ದ ಸ್ಟೈಲ್ ಇದುವರೆಗೂ, ಯಾರೊಬ್ಬರೂ ಟಚ್ ಮಾಡಿಲ್ಲ, ಅವರು ಎದುರು ಬಂದರೆ, ಹುಲಿ ಮೈ ಮೇಲೆ ಏರಿ ಬರುತ್ತಿದೆ, ನಮ್ಮನ್ನು ತಿಂದುಬಿಡುತ್ತದೇನೋ ಅನಿಸುತ್ತಿತ್ತು. ಆ ಸ್ಟೈಲ್ನ ನಾನು ಸಹ ಪ್ರಾಕ್ಟೀಸ್ ಮಾಡುತ್ತಿದ್ದೆ. ನಿರ್ಮಾಪಕ ಸೋಮಶೇಖರ್ ಅವರು ತುಂಬಾ ಪ್ರೀತಿಯಿಂದ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಖಂಡಿತ ಚಿತ್ರ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದರು.
ನಂತರ ಚಿತ್ರದ ನಿರ್ಮಾಪಕ ಸೋಮಶೇಖರ್ ಅವರು ಮಾತನಾಡುತ್ತ. ಫೈಟರ್ ಚಿತ್ರ ನಿಜಕ್ಕೂ ತುಂಬಾ ಸೂಪರ್ಬ್ ಆಗಿ ಮೂಡಿ ಬಂದಿದೆ. ಇಲ್ಲೀವರೆಗೆ ನೀವೆಲ್ಲ ತುಂಬಾ ಸಪೋರ್ಟ್ ಮಾಡಿದ್ದೀರಿ, ಇನ್ನು ಮುಂದೆಯೂ ನಮಗೆ ನಿಮ್ಮ ಸಪೋರ್ಟ್ ಬೇಕು.
ದುನಿಯಾ ವಿಜಯ್ ಅವರು ಬಂದು ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ತುಂಬಾ ಖುಷಿಯಾಯ್ತು ಎಂದು ಹೇಳಿದರು. ನಾಯಕ
ವಿನೋದ್ ಪ್ರಭಾಕರ್ ಮಾತನಾಡುತ್ತ ನಾನು ರೈತನ ಮಗನಾಗಿ ಅಭಿನಯಿಸಿದ್ದೇನೆ. ಇಲ್ಲಿ ಬಂದಿರುವ ಎಲ್ಲರೂ ಎಷ್ಟೇ ಬ್ಯಸಿ ಇದ್ದರೂ ಬಿಡುವು ಮಾಡಿಕೊಂಡು ನಮಗೋಸ್ಕರ ಬಂದಿದ್ದಾರೆ ಎನ್ನುತ್ತಾ ಚಿತ್ರದ ಡೈಲಾಗ್ ಹೇಳಿ ನೆರೆದಿದ್ದ ಸಹಸ್ರಾರು ಅಭಿಮಾನಿ ಪ್ರೇಕ್ಷಕರನ್ನು ರಂಜಿಸಿದರು.
ನಟ ಶ್ರೀನಗರ ಕಿಟ್ಟಿ, ಧರ್ಮ ಕೀರ್ತಿರಾಜ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಫೈಟರ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ನೂತನ್ ಉಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸೋಮಶೇಖರ್ ಕಟ್ಟಿಗೇನಹಳ್ಳಿ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ವಿನೋದ್ ಪ್ರಭಾಕರ್ ಜೊತೆ ನಾಯಕಿಯರಾಗಿ ಲೇಖಾ ಚಂದ್ರ ಮತ್ತು ಪಾವನ ಗೌಡ ಅಭಿನಯಿಸಿದ್ದಾರೆ. ಮಿಕ್ಕಂತೆ ನಾಯಕನ ತಾಯಿಯಾಗಿ ಹಿರಿಯ ನಟಿ ನಿರೋಷ, ದೀಪಕ್ ರಾಜ್ ಶೆಟ್ಟಿ, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.